ನೆಚ್ಚಿನ ಯಕ್ಷಪ್ರೇಮಿಗಳೇ,
ಯಕ್ಷವಾಹಿನಿ ಸಮೂಹ ಮತ್ತು ಸಂಸ್ಥೆಯ ನಾಲ್ಕನೇ
ಯೋಜನೆಯಾದ “ಯಕ್ಷಸಂಘಟನಾಕೋಶ”ವು ಈ ಮೂಲಕ ಲೋಕಾರ್ಪಣೆಯಾಗುತ್ತಿದೆ. ಈಗಾಗಲೇ ಚಾಲನೆಯಲ್ಲಿರುವ ಯೋಜನೆಗಳಾದ
ಯಕ್ಷಪ್ರಸಂಗಕೋಶ, ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಪ್ರಸಂಗಯಾದಿ ಯೋಜನೆಗಳ ಜೊತೆಜೊತೆಯಲ್ಲೇ ಯಕ್ಷಪ್ರೇಮಿಗಳ ಕೊಡುಗೆಯಲ್ಲೇ ಬೆಳೆಯಬೇಕಾದ ಇನ್ನೊಂದು ಶಿಶು
ಇದು, ದಯವಿಟ್ಟು ದತ್ತು ತೆಗೆದುಕೊಂಡು ಸಾಕಿ ಬೆಳೆಸಿ.
ಯಕ್ಷಸಂಘಟನಾಕೋಶವು ಯಕ್ಷಗಾನಕ್ಕೆ ಸಂಬಂಧಿಸಿದ
ಎಲ್ಲಾ ಸಣ್ಣ ಹಾಗೂ ದೊಡ್ಡ ಸಂಘಟನೆಗಳ ಹಾಗೂ ಸಂಸ್ಥೆಗಳ ಕುರಿತಾಗಿ ಆಮೂಲಾಗ್ರವಾಗಿ ಅಂತರಜಾಲದಲ್ಲಿ
ದಾಖಲೀಕರಿಸಲು ಹೊರಟಿದೆ. ಈ ಸಂಘಟನೆಗಳು ವ್ಯಾವಸಾಯಿಕ
/ ಹರಕೆ / ಹವ್ಯಾಸಿ ಮೇಳಗಳಿರಬಹುದು, ಪ್ರತಿಷ್ಠಾನಗಳಿರಬಹುದು, ಖಾಸಗಿ ಉದ್ಯಮವಿರಬಹುದು, ಸಾರ್ವಜನಿಕವಾದ
ಯಾ ಸರಕಾರೀ ಸ್ವಾಮ್ಯದ ಒಕ್ಕೂಟವೂ ಆಗಿರಬಹುದು. ಸಮಕಾಲೀನ ಹಾಗೂ ಚಾರಿತ್ರಿಕವಾಗಿ ಮೆರೆದು ಅಳಿದು ಹೋದ
೩,೦೦೦ದಿಂದ ೫,೦೦೦ದವರೆಗೆ ಇರಬಹುದಾದ ಸಂಘಟನೆಗಳೆಲ್ಲವನ್ನೂ ದಾಖಲೀಕರಿಸುವ ಉದ್ದೇಶ ನಮ್ಮದು. ಯಕ್ಷವಾಹಿನಿಯ
ಎಲ್ಲಾ ಯೋಜನೆಗಳು ಸಮಗ್ರ ಕರ್ನಾಟಕದ ಯಕ್ಷಗಾನದ ಎಲ್ಲಾ ಪಾಯಗಳನ್ನು ಹಾಗೂ ತಿಟ್ಟುಗಳನ್ನು ಗಮನಿಸುವುದರಿಂದ
ಈ ಯೋಜನೆಯೂ ಅದನ್ನೇ ಅನುಸರಿಸುವದಲ್ಲದೇ ರಾಜ್ಯ, ದೇಶಗಳ ಗಡಿ ಮೀರಿ ಅಂತರರಾಷ್ಟ್ರೀಯ ಸಂಘಟನೆಗಳನ್ನೂ
ದಾಖಲೀಕರಿಸಿ ವಿಶ್ವಗಾನವಾಗುತ್ತಿರುವ ಯಕ್ಷಗಾನಕ್ಕೆ ತಕ್ಕ ನ್ಯಾಯ ಸಲ್ಲಿಸುವ ತವಕದಲ್ಲಿದೆ.
ಯಕ್ಷಸಂಘಟನಾಕೋಶ ಯೋಜನೆಯು ಯಕ್ಷಪ್ರಸಂಗಕೋಶ
ಯಾ ಪ್ರಸಂಗಪ್ರತಿಸಂಗ್ರಹ ಯೋಜನೆಗಳಂತೆಯೇ ಎರಡು ಸ್ತರದಲ್ಲಿ ದಾಖಲೀಕರಣವನ್ನು ಅನಾವರಣಗೊಳಿಸುತ್ತದೆ.
ಯಕ್ಷಸಂಘಟನೆಗಳ ಕೋಷ್ಟಕವು ಸಂಘಟನೆಗಳನ್ನು ಸಂಸ್ಥೆಯ
ಹೆಸರಿನ ಸರತಿಯಲ್ಲಿ ಪ್ರತೀ ಸಂಸ್ಥೆಯ ಸಂಕ್ಷಿಪ್ತ ಮಾಹಿತಿಯನ್ನು ಕೊಡುತ್ತಾ ಹೋಗುತ್ತದೆ.
ಈ ಸಂಕ್ಷಿಪ್ತ ಮಾಹಿತಿಯ ಸಾಲಿನಲ್ಲಿ ಕೊಟ್ಟಿರುವ ಕೊಂಡಿಯನ್ನು ಒತ್ತಿದರೆ, ಆ ಸಂಸ್ಥೆಯ ವಿವರವಾದ ಮಾಹಿತಿ
ತುಂಬಿದ ದಸ್ತಾವೇಜು ಅನಾವರಣಗೊಂಡು ಆ ದಸ್ತಾವೇಜನ್ನು ಯಾರು ಬೇಕಾದರೂ ಇಳಿಸಿಕೊಂಡು ಉಳಿಸಿಕೊಳ್ಳಬಹುದಾಗಿದೆ.
ಕೋಷ್ಟಕ ಹಾಗೂ ಸಂಘಟನಾ ವಿವರದ ಮಾಹಿತಿಯ ದಸ್ತಾವೇಜು
ಎರಡರಲ್ಲೂ ಆಯಾ ದಸ್ತಾವೇಜಿಗೆ ಸಂಬಂಧಿಸಿದ ಅಂತರಜಾಲ ಕೊಂಡಿಯನ್ನು ಕೊಡುವುದರಿಂದ, ಆ ಕೊಂಡಿಯನ್ನು
ಒತ್ತಿಕೊಂಡು ಹಳೆಯ ಆವೃತ್ತಿಯ ದಸ್ತಾವೇಜಿನ ಮೂಲಕವೇ ತೀರಾ ಇತ್ತೀಚಿನ ಆವೃತ್ತಿಯನ್ನು ಇಳಿಸಿಕೊಳ್ಳಲು
ಅನುಕೂಲಮಾಡಿಕೊಡಲಾಗಿದೆ.
ಯಕ್ಷಸಂಘಟನಾಕೋಶವನ್ನು ಬೆಳೆಸಲು ಎರಡು ನಿಟ್ಟಿನ
ಪ್ರಯತ್ನಗಳು ಸಮಾನಾಂತರವಾಗಿ ಸಾಗಬೇಕಾಗಿದೆ. ಒಂದು
ನಿಟ್ಟಿನಲ್ಲಿ ಸಂಘಟನೆಯ ಸಂಕ್ಷಿಪ್ತ ಮಾಹಿತಿಯು ಕೋಷ್ಟಕದಲ್ಲಿ ತುಂಬುತ್ತಾ ಹೋಗಬೇಕಾಗಿದೆ, ಇನ್ನೊಂದೆಡೆ,
ಪ್ರತೀ ಸಂಘಟನೆಯ ಕುರಿತಾದ ವಿವರವಾದ ಮಾಹಿತಿಯ ದಸ್ತಾವೇಜು ತಯಾರಾಗಿ, ಕೊಂಡಿಯ ರೂಪದಲ್ಲಿ ಕೋಷ್ಟಕವನ್ನು
ಸೇರಬೇಕಾಗಿದೆ. ಈ ಎರಡೂ ಕೆಲಸಗಳು ಯಕ್ಷಪ್ರೇಮಿಗಳ crowd sourcing ಪ್ರಯತ್ನಗಳ ಮೂಲಕ ಫಲಪ್ರದವಾಗಬೇಕಾಗಿದೆ.
ಯಕ್ಷಸಂಘಟನಾಕೋಶದ ಕೋಷ್ಟಕಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ.
ಉದಾಹರಣೆಯಾಗಿ “ಯಕ್ಷವಾಹಿನಿ” ಸಂಸ್ಥೆಯ ವಿವರವಾದ
ಮಾಹಿತಿಯ ದಸ್ತಾವೇಜಿನ ಕೊಂಡಿಯನ್ನು ಇಲ್ಲಿ ಕೊಡಲಾಗಿದೆ. ಇದೇ ಕೊಂಡಿಯನ್ನು ಕೋಷ್ಟಕದಲ್ಲಿ ಯಕ್ಷವಾಹಿನಿ
ಸಂಸ್ಥೆಯ ಸಂಕ್ಷಿಪ್ತ ಮಾಹಿತಿಯ ಭಾಗವಾಗಿಯೂ ಕೊಡಲಾಗಿದೆ.
ನಿಮಗೆ ಸಂಬಂಧಿಸಿದ ಯಕ್ಷಸಂಘಟನೆಯ ಕುರಿತಾದ
ಮಾಹಿತಿಯನ್ನು ತುಂಬಲು ಕೆಳಗೆ ಕೊಟ್ಟಿರುವ ದಸ್ತಾವೇಜು ಮಾದರಿಯನ್ನು ಉಪಯೋಗಿಸಿ.
ಸಾಧ್ಯವಾದರೆ ಮೇಲೆ ತೋರಿಸಿದ MS Word ನಮೂನೆಯಲ್ಲೇ ಈ ಮಾದರಿಯ ದಸ್ತಾವೇಜನ್ನು ತುಂಬಿಸಿ
ಕಳುಹಿಸಿ, ಇಲ್ಲವಾದರೆ ಕೆಳಗೆ ತೋರಿಸಿದ ಪಿಡಿಎಫ್ ಮಾದರಿಯಲ್ಲಿ ತೋರಿಸಿದ ತಲೆಬರೆಹಗಳನ್ನು ನಮೂದಿಸಿ
ಅವುಗಳ ಕೆಳಗೆ ವಿವರವಾದ ಮಾಹಿತಿಯನ್ನು ಬರೆದು ವಾಟ್ಸ್ಯಾಪ್ ಯಾ ಮಿಂಚಂಚೆಯಲ್ಲಿ ನೇರವಾಗಿ ಕಳುಹಿಸಿರಿ. ಆ ಮಾಹಿತಿಯನ್ನು ತುಂಬಿ ದಸ್ತಾವೇಜನ್ನು ನಾವು ತಯಾರಿಸಿ ಸೇರಿಸುತ್ತೇವೆ.
ಈ ಯೋಜನೆಯು ಎಲ್ಲಾ ರೀತಿಯಲ್ಲಿ ಎಲ್ಲರಿಗೂ
ಸಲ್ಲುವ win-win ಸದಾವಕಾಶವಾಗಿದೆ. ಆಯಾ ಸಂಘಟನೆಯು ಈ ಕೋಶದ ಮೂಲಕ ವಿವರವಾಗಿ ಜಗಜ್ಜಾಹೀರಾದರೆ, ಯಕ್ಷಪ್ರೇಮಿಗಳಿಗೆ,
ಯಕ್ಷಗಾನಕ್ಕೆ ಮುಡಿಪಾದ ಪ್ರತಿಷ್ಠಾನಗಳಿಗೆ ಹಾಗೂ ಸರಕಾರೀ ಸ್ವಾಮ್ಯದ ಒಕ್ಕೂಟಗಳಿಗೆ ಕೋಶದಲ್ಲಿನ ಮಾಹಿತಿಯು
ಹೆಚ್ಚಿನ ಪ್ರಸಾರ ಮತ್ತು ಫಲಿತಾಂಶದತ್ತ ಈ ಯೋಜನೆಯು ಸಹಕರಿಸಲಿದೆ. ಇಲ್ಲಿನ ಮಾಹಿತಿಯು ಎಲ್ಲಾ ಸಂಘಟನೆಗಳ ಮಧ್ಯೆ
ಸಾಂಗತ್ಯ, ಸಹಕಾರ, ಸಹಯೋಗವನ್ನು ಬೆಳೆಸುತ್ತಾ ಆರೋಗ್ಯಕರ ಪೈಪೋಟಿಯನ್ನೂ ಹೆಚ್ಚಿಸಲಿದೆ.
ಆಯಾ ಸಂಸ್ಥೆಗಳು ತಮ್ಮದೇ ಆದ ತಾಣಗಳಲ್ಲಿ ಮಾಹಿತಿಯನ್ನು
ತುಂಬುತ್ತಾ ಇಲ್ಲವೇ ಪರಿಷ್ಕರಿಸುತ್ತಾ ಹೋಗುವುದರಿಂದ ಅಂತಹ ತಾಣಗಳ ಕೊಂಡಿಯನ್ನು ನಮ್ಮ ಕೋಶದ ವಿವರವಾದ
ದಸ್ತಾವೇಜಿನಲ್ಲಿ ಸೇರಿಸುವುದರ ಮೂಲಕ ಪದೇ ಪದೇ ನಮ್ಮಲ್ಲಿನ ದಸ್ತಾವೇಜನ್ನು ಪರಿಷ್ಕರಿಸುವ ಕೆಲಸ ಕಡಿಮೆ
ಮಾಡಬಹುದು, ಮಾತ್ರವಲ್ಲದೇ ನಮ್ಮ ಕೋಶದ ಮೂಲಕ ಪದೇ ಪದೇ ಯಕ್ಷಪ್ರೇಮಿಗಳನ್ನು ತಮ್ಮ ಸಂಘಟನೆಗೆ ಸಂಬಂಧಿಸಿದ
ತಾಣಗಳತ್ತ ಎಳೆದು ಒಯ್ಯಬಹುದಾಗಿದೆ.
ಈ ಯೋಜನೆಯ ಸುತ್ತ ನೀವು ಕೆಳಕಂಡ ರೀತಿಗಳಲ್ಲಿ
ಸಹಕರಿಸಬಹುದಾಗಿದೆ.
೧. ನಿಮಗೆ ತಿಳಿದಿರುವ ಸಂಘಟನೆಗಳ ಸಂಕ್ಷಿಪ್ತ
ಮಾಹಿತಿ ಒದಗಿಸಿರಿ, ವಿವರವಾದ ಮಾಹಿತಿ ಕೊಡಬಲ್ಲ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಗಳ ಸಂಪರ್ಕ ಮಾಹಿತಿ
ಒದಗಿಸಿ.
೨. ಒಂದು ಸಂಸ್ಥೆಯ ಪರವಾಗಿ ಆ ಸಂಸ್ಥೆಯ ಸಮ್ಮತಿ
ಪಡೆದು, ವಿವರವಾದ ಮಾಹಿತಿಯ ದಸ್ತಾವೇಜನ್ನು ತಯಾರಿಸಿ ಕೊಡಿ ಇಲ್ಲಾ ನಾವೇ ದಸ್ತಾವೇಜು ತಯಾರಿಸಲು ಅನುಕೂಲವಾಗಲು
ಸಂಬಂಧಿತ ಎಲ್ಲಾ ಮಾಹಿತಿಯನ್ನು ಬರೆದು ಕಳುಹಿಸಿ.
೩. ಈಗಾಗಲೇ ದಾಖಲಾಗಿರುವ ಸಂಘಟನೆಗಳ ಸಂಕ್ಷಿಪ್ತ
ಯಾ ವಿವರವಾದ ಮಾಹಿತಿಯನ್ನು ಪರಿಷ್ಕರಿಸಲು, ದೋಷಗಳನ್ನು ಹೋಗಲಾಡಿಸಲು ಸಹಕರಿಸಿ.
೪. ಈ ಯೋಜನೆ ಮತ್ತು ಸಂಘಟನೆಗಳ ನಡುವಿನ ಸೇತುವಾಗಿ
ಕೆಲಸ ಮಾಡಿ ಎಲ್ಲರೂ ಗೆಲ್ಲುವಂತೆ ಸಹಕರಿಸಿ.
೫. ಈ ಕೋಶವು ಹಾಗೂ ಸಂಬಂಧಿತ ಯೋಜನೆಯ ಪ್ರಕಟಣೆಗಳು
ಯಕ್ಷಗಾನ ವಲಯದಲ್ಲಿ ಜಗಜ್ಜಾಹೀರಾಗುವತ್ತ ಪ್ರಸಾರ ಮಾಡಿ ಸಹಕರಿಸಿ.
೬. ಈ ಯೋಜನಾ ಸಮೂಹಕ್ಕೆ ಸ್ವಯಂಸೇವಕರಾಗಿ ಸೇರಿ
ಸಂಬಂಧಿತ ದಸ್ತಾವೇಜು ತಯಾರಿ ಯಾ ಪರಿಷ್ಕರಣೆ ಕೆಲಸಗಳಲ್ಲಿ ಸಹಕರಿಸಿ.
೭. ಚಾರಿತ್ರಿಕವಾಗಿ ಮೆರೆದು ಹೋಗಿ ಈಗ ಇಲ್ಲವಾಗಿರುವ
ಸಂಘಟನೆಗಳ ಸಂಶೋಧನೆ ಮಾಡಿ ಸಂಬಂಧಿತ ಮಾಹಿತಿ ಕೊಡಿಸಿ ಇಲ್ಲಾ ಕೊಡಬಲ್ಲ ವ್ಯಕ್ತಿಗಳ ಸಂಪರ್ಕ ಒದಗಿಸಿ.
೮. ಈ
ಯೋಜನೆಯನ್ನು ಇನ್ನೂ ಉತ್ತಮ ರೀತಿಯಲ್ಲಿ
ಮುಂದುವರಿಸುವಲ್ಲಿ ನಿಮ್ಮ ಯಾವುದೇ ಸಲಹೆಗಳಿದ್ದರೆ ನಮಗೆ ತಿಳಿಸಿ.
ಸಂಪರ್ಕ ಮಾಹಿತಿ:
ದೂರವಾಣಿ / ವಾಟ್ಸ್ಯಾಪ್: 9880675034 (ವಸಂತಕೃಷ್ಣ ಪಟ್ಟಾಜೆ)
ಮಿಂಚಂಚೆ: yakshasanghatanakosha@gmail.com
ಬ್ಲಾಗ್: https://yakshasanghatanakosha.yakshavahini.com
ಧನ್ಯವಾದಗಳು!
ನಿಮ್ಮೆಲ್ಲರ ಸಹಕಾರ, ಸಹಯೋಗ ಹಾಗೂ ಶುಭಹಾರೈಕೆಗಳನ್ನು ಬಯಸುವ
- ನಟರಾಜ ಉಪಾಧ್ಯ ಹಾಗೂ ಯಕ್ಷವಾಹಿನಿ ಸಂಸ್ಥೆ / ಸಮೂಹದ ಸರ್ವ ಸದಸ್ಯರು
Good luck.
ReplyDeleteGreat job
ReplyDeleteಶನೀಶ್ವರ ಮಹಾತ್ಮೆ
ReplyDelete